ಖಾಸಗಿ ಉದ್ಯಮ

	ಖಾಸಗಿ ವ್ಯಕ್ತಿಗಳ ಅಥವಾ ಗುಂಪುಗಳ ಒಡೆತನ, ಸಂಘಟನೆ, ವ್ಯವಸ್ಥಾಪನ, ನಿಯಂತ್ರಣಗಳಿಗೆ ವ್ಯವಹಾರೋದ್ಯಮಗಳು ಒಳಪಟ್ಟಿರುವಂಥ ವ್ಯವಸ್ಥೆ. ಲಾಭದೃಷ್ಟಿ, ಸ್ಪರ್ಧೆಯ ಪರಿಸ್ಥಿತಿ-ಇವು ಸಾಮಾನ್ಯವಾಗಿ ಇದಕ್ಕೆ ಪ್ರೇರಣೆಗಳಾಗಿರುತ್ತವೆ. ತಾತ್ತ್ವಿಕವಾಗಿ ಖಾಸಗಿ ಉದ್ಯಮ ಸರ್ಕಾರದ ಹಸ್ತಕ್ಷೇಪದಿಂದ ಮುಕ್ತವಾಗಿರುವುದೆಂದು ಹೇಳಲಾದರೂ, ರಾಜಕೀಯ ಸಾಮಾಜಿಕ ಮತ್ತು ಆರ್ಥಿಕ ಕಾರಣಗಳಿಂದಾಗಿ ವಸ್ತುತಃ ಅದು ಸಾಮಾನ್ಯವಾಗಿ ಎಲ್ಲ ದೇಶಗಳಲ್ಲೂ ಸರ್ಕಾರಿ ನಿಯಂತ್ರಣಗಳಿಗೆ ಒಳಪಟ್ಟಿರುತ್ತದೆ. ಆಯಾ ದೇಶದ ರಾಜಕೀಯ ವ್ಯವಸ್ಥೆಗೆ ಅನುಗುಣವಾಗಿ ಈ ನಿಯಂತ್ರಣದ ಪ್ರಮಾಣ ವ್ಯತ್ಯಾಸವಾಗುತ್ತದೆ. ಸ್ವಹಿತಮೂಲವಾಗಿ ಸಂಭವಿಸುವ ಸ್ಪರ್ಧೆಯ ಪರಿಸ್ಥಿತಿಯಲ್ಲಿ ಬೇಡಿಕೆ-ಸರಬರಾಯಿಗಳ ಪರಸ್ಪರ ಕ್ರಿಯೆಗಳಿಂದಾಗಿ ನಿಶ್ಚಿತವಾಗುವ ಬೆಲೆಗಿಂತ ಆದಷ್ಟು ಕಡಿಮೆ ವೆಚ್ಚದಲ್ಲಿ ಸರಕನ್ನು ಉತ್ಪಾದಿಸಿ ಗರಿಷ್ಠ ಲಾಭ ಗಳಿಸಲು ಉತ್ಪಾದಕರು ಉದ್ಯುಕ್ತರಾಗುವರಾದ್ದರಿಂದ ಉದ್ಯಮದ ದಕ್ಷತೆ ಉನ್ನತ ಮಟ್ಟದಲ್ಲಿರುವುದೆಂದೂ ಹೇಳಲಾಗಿದೆ. ಸಮಾಜದ ಆವಶ್ಯಕತೆ, ಕಲ್ಯಾಣ, ಸರಕು ಅಥವಾ ಸೇವೆಗಾಗಿ ಒಟ್ಟಿನಲ್ಲಿ ಸಮಾಜ ಹೊರಬೇಕಾದ ವೆಚ್ಚ ಇವುಗಳಿಗಿಂತ ವ್ಯಕ್ತಿಯ ಲಾಭದೃಷ್ಟಿ ಮುಖ್ಯವಾದರೂ ಸಮಾಜದ ಬೇಕುಬೇಡಗಳ ಸೂಚಿಯಾಗಿ ಬೆಲೆ ವ್ಯವಸ್ಥೆ ವರ್ತಿಸುವುದರಿಂದ ಖಾಸಗಿ ಉದ್ಯಮದ ಇಡೀ ದರ್ಶನ ಅದರ ಮೇಲೆಯೇ ನಿಂತಿದೆಯೆನ್ನಬಹುದು. ಪರಿಪೂರ್ಣ ಸ್ಫರ್ಧೆಯ ಅಭಾವದಿಂದಾಗಿ ಇದು ಕೇವಲ ತಾತ್ತ್ವಿಕವಾಗಿ ಉಳಿದಿದೆ.

	ವ್ಯವಹಾರ ಚಟುವಟಿಕೆಗಳ ಉಗಮದ ಕಾಲದಲ್ಲೇ ಖಾಸಗಿ ಉದ್ಯಮವೂ ಆರಂಭವಾಯಿತೆನ್ನಬಹುದು. ಆದ್ಯ ಅಭಿಜಾತ ಅರ್ಥಶಾಸ್ತ್ರಜ್ಞರನೇಕರು ಈ ವ್ಯವಸ್ಥೆಯನ್ನು ಸರ್ಕಾರಿ ಉದ್ಯಮಕ್ಕಿಂತ ಹೆಚ್ಚು ದಕ್ಷವೆಂದೂ ಸಾಹಸಯುಕ್ತವೆಂದೂ ಹೊಗಳಿದ್ದಾರೆ. ಈಚಿನ ಅನೇಕ ಅರ್ಥಶಾಸ್ತ್ರಜ್ಞರು ಇದನ್ನು ಟೀಕಿಸಿಯೂ ಇದ್ದಾರೆ. ಉತ್ಪಾದನ ಸಾಧನಗಳ ಖಾಸಗಿ ಒಡೆತನ ನಿರ್ವಹಣೆಗಳಿಂದ ವರಮಾನ ಸಂಪತ್ತುಗಳ ಅಸಮ ವಿತರಣೆಯಾಗುವುದೆಂದೂ ಕಾರ್ಮಿಕರೂ ಅನುಭೋಗಿಗಳೂ ಶೋಷಣೆಗೆ ಒಳಗಾಗುವರೆಂದೂ ಏಕಸ್ವಾಮ್ಯ, ಕಲಬೆರಕೆ, ಕಾಳಸಂತೆ ಮುಂತಾದ ಸಮಾಜವಿರೋಧಿ ಪ್ರವೃತ್ತಿಗಳು ಲಾಭದೃಷ್ಟಿಯಿಂದಾಗಿ ಬೆಳೆಯುವುವೆಂದೂ ಹೇಳಲಾಗಿದೆ.

	ಬಂಡವಾಳ ವ್ಯವಸ್ಥೆಯ ಪ್ರಧಾನ ಲಕ್ಷಣವೆಂದರೆ ಖಾಸಗಿ ಉದ್ಯಮ. ಬಂಡವಾಳ ವ್ಯವಸ್ಥೆ, ಖಾಸಗಿ ಉದ್ಯಮ ಇವೆರಡೂ ಸಮಾನಾರ್ಥಕಗಳೆಂಬಂತೆಯೂ ಸಾಮಾನ್ಯವಾಗಿ ಭಾವಿಸುವುದುಂಟು. ಬಂಡವಾಳ ವ್ಯವಸ್ಥೆಯ ಒಳಿತು ಕೆಡಕುಗಳೆಲ್ಲ ಖಾಸಗಿ ಉದ್ಯಮದೆಂದೂ ಖಾಸಗಿ ಉದ್ಯಮದ ಎಲ್ಲ ಒಳಿತು ಕೆಡಕುಗಳೂ ಬಂಡವಾಳ ವ್ಯವಸ್ಥೆಯದೆಂದೂ ಹೇಳುವ ವಾಡಿಕೆಯಿದೆ.

	ಉದ್ಯಮದ ಸ್ವರೂಪ ಹಾಗೂ ಆವಶ್ಯಕತೆಗಳಿಗೆ ಅನುಗುಣವಾಗಿ ಖಾಸಗಿ ಉದ್ಯಮ ಘಟನೆ ನಾನಾರೂಪಗಳನ್ನು ತಳೆಯಬಹುದು. 
(ನೋಡಿ- ಏಕವ್ಯಕ್ತಿ-ಸಂಸ್ಥೆ)
(ನೋಡಿ- ಪಾಲುದಾರಿಕೆ)
(ನೋಡಿ- ಕಂಪನಿ)
(ನೋಡಿ- ಕಾರ್ಪೊರೇಷನ್) -ಇವು ಕೆಲವು ಪ್ರರೂಪಗಳು. ಇವುಗಳನ್ನು ಕುರಿತ ವಿವರಗಳಿಗೆ ಆಯಾ ಶೀರ್ಷಿಕೆಗಳನ್ನು ನೋಡಿ.

	ಖಾಸಗಿ ಉದ್ಯಮ ವಲಯ: ಸಂಪೂರ್ಣವಾಗಿ ಸ್ವತಂತ್ರವಾದ ಖಾಸಗಿ ಉದ್ಯಮ ವ್ಯವಸ್ಥೆ ಇಂದು ವಿಶ್ವದ ಯಾವ ನಾಗರಿಕ ರಾಷ್ಟ್ರದಲ್ಲೂ ಇಲ್ಲ. ಒಂದು ದೇಶದ ಆರ್ಥಿಕತೆಯ ಕಾರ್ಯಭಾಗಗಳನ್ನು ಅಧ್ಯಯನ ಮಾಡುವ ಸಲುವಾಗಿ ಅದನ್ನು ವಿವಿಧ ವಲಯಗಳಾಗಿ ವಿಂಗಡಿಸುವುದು ಅನುಕೂಲಕರ. ಒಂದು ಆರ್ಥಿಕತೆಯ ಮುಖ್ಯ ವಲಯಗಳು ಎರಡು: 1 ಸರ್ಕಾರಿ ವಲಯ: ಕೇಂದ್ರ ಪ್ರಾಂತೀಯ ಸ್ಥಳೀಯ ಸರ್ಕಾರಗಳು ನಡೆಸುವ ರಾಷ್ಟ್ರೀಕೃತ ಉದ್ಯಮಗಳು, ಇತರ ಸಾರ್ವಜನಿಕ ಕಾರ್ಪೊರೇಷನ್‍ಗಳು ಇವೆಲ್ಲ ಇದರ ಕಕ್ಷೆಯಲ್ಲಿ ಬರುತ್ತವೆ. 2 ಖಾಸಗಿ ವಲಯ: ಯಾವುದೇ ಸರ್ಕಾರದ ಅಂಗವಾಗಿರದ, ಆರ್ಥಿಕತೆಯ ಇತರ ಎಲ್ಲ ಧಾತುಗಳೂ (ಎಲಿಮೆಂಟ್ಸ್) ಇದಕ್ಕೆ ಒಳಪಡುತ್ತವೆ. ಸಮಾಜವಾದಿ ವ್ಯವಸ್ಥೆಯಲ್ಲಿ ಎಲ್ಲ ಉತ್ಪಾದನ ಸಾಧನಗಳೂ ರಾಷ್ಟ್ರದ ಒಡೆತನಕ್ಕೆ ಒಳಪಟ್ಟಿರುತ್ತವೆ. ಉಳಿದ ವ್ಯವಸ್ಥೆಗಳಲ್ಲಿ ಖಾಸಗಿ ಹಾಗೂ ಸರ್ಕಾರಿ ಉದ್ಯಮಗಳೆರಡೂ ಇರುವುದುಂಟು. ಇದು ಮಿಶ್ರ ಆರ್ಥಿಕತೆ. ಖಾಸಗಿ ಮತ್ತು ಸರ್ಕಾರಿ ವಲಯಗಳ ಸಾಪೇಕ್ಷ ಗಾತ್ರ, ಪ್ರಭಾವ, ದಕ್ಷತೆ, ಸಾಮಥ್ರ್ಯಗಳು ದೇಶದಿಂದ ದೇಶಕ್ಕೆ ವ್ಯತ್ಯಾಸವಾಗುತ್ತವೆ.

	ಖಾಸಗಿ ವಲಯದಲ್ಲಿ ಪ್ರಕೃತಿಸಂಪತ್ತು, ಉತ್ಪಾದನ ಸಾಮಗ್ರಿ, ಬಂಡವಾಳಗಳು ಕೆಲವೇ ಪ್ರಭಾವಶಾಲಿ ಉದ್ಯಮಿಗಳ ನಿಯಂತ್ರಣದಲ್ಲಿರುವುದರಿಂದ, ವಿವಿಧ ಉದ್ಯಮಗಳನ್ನು ಪ್ರಾರಂಭಿಸಿ, ಒಳ್ಳೆಯ ಗುಣಮಟ್ಟದ ವಸ್ತುಗಳನ್ನು ಉತ್ಪಾದಿಸಿ, ದಕ್ಷತೆ ಹೆಚ್ಚಿಸಿ, ವೆಚ್ಚಗಳನ್ನು ಮಿತಗೊಳಿಸಲು ಪ್ರಯತ್ನಿಸಿ, ಅಧಿಕ ಲಾಭ ಗಳಿಸುವ ಪ್ರಯತ್ನಗಳು ನಡೆಯುತ್ತವೆ; ದೇಶದ ಕೈಗಾರಿಕಾಕರಣ ಸುಲಭಸಾಧ್ಯವಾಗುತ್ತದೆ; ತೀವ್ರ ಆರ್ಥಿಕ ಪ್ರಗತಿಯಾಗುತ್ತದೆ-ಎಂಬ ವಾದಗಳನ್ನು ಮುಂದಿರಿಸಿ ಹಲವರು ಖಾಸಗಿ ವಲಯದ ಉದ್ಯಮಗಳಿಗೆ ಪ್ರೋತ್ಸಾಹ ಬಯಸಿದರೂ ಸಾಮಾನ್ಯವಾಗಿ ಖಾಸಗಿ ವಲಯದಲ್ಲಿ ಅಲ್ಪಕಾಲದಲ್ಲಿ ಕಡಿಮೆ ಬಂಡವಾಳದಿಂದ ಹೆಚ್ಚು ಲಾಭ ತರುವಂಥ ಅನುಭೋಗ ಸರಕುಗಳ ಉತ್ಪಾದನೆಗೆ ಹೆಚ್ಚು ಪ್ರಯತ್ನಗಳು ನಡೆಯುವುದೇ ಸಾಮಾನ್ಯ. ಮೂಲಭೂತವಾದ, ಶೀಘ್ರಲಾಭ ತರದ, ಹೆಚ್ಚು ಲಾಭದಾಯಕವಲ್ಲದ, ಜನೋಪಯೋಗಿಯಾದ ಕೈಗಾರಿಕೆಗಳ ಬೆಳೆವಣಿಗೆಯ ಕಡೆಗೆ ಲಕ್ಷ್ಯ ಹರಿಸದಿರುವ ಸಂಭವವುಂಟು. ನಿಸರ್ಗ ಸಾಧನಗಳು ಪೋಲಾಗುವ ಅಪಾಯವೂ ಇರುತ್ತದೆ. ದೇಶದ ದೀರ್ಘಕಾಲಿಕ ಅಭಿವೃದ್ಧಿಗೆ ಅಲ್ಲಿ ಗಮನ ಕಡಿಮೆ. ಕ್ರಮಬದ್ಧ ಆರ್ಥಿಕ ಯೋಜನೆಗಳೂ ಕಷ್ಟಸಾಧ್ಯ. ಪ್ರಬಲ ಖಾಸಗಿವಲಯವಿದ್ದಲ್ಲಿ ಆರ್ಥಿಕ ಶಕ್ತಿಗಳು ಕೇಂದ್ರೀಭವಿಸಿ ಜನಸಾಮಾನ್ಯರೂ ಕಾರ್ಮಿಕರೂ ಶೋಷಣೆಗೆ ಒಳಗಾಗಬಹುದು. ಬಡವ-ಶ್ರೀಮಂತ ಎಂಬ ವ್ಯತ್ಯಾಸ ಹೆಚ್ಚಿ ದೇಶದ ಆರ್ಥಿಕ, ಸಾಮಾಜಿಕ, ರಾಜಕೀಯ ವ್ಯವಸ್ಥೆಗಳ ಮೇಲೆ ದುಷ್ಟ್ರಭಾವ ಉಂಟಾಗಬಹುದು.

	ಯಾವುದೇ ದೇಶದ ಆರ್ಥಿಕ ನಿರ್ಮಾಣ ಪ್ರಾರಂಭದ ಹಂತದಲ್ಲಿದ್ದಾಗ ದೇಶೀಯ ಬಂಡವಾಳ, ತಂತ್ರಜ್ಞಾನ ಮತ್ತು ಉದ್ಯಮಿಗಳ ಅಭಾವವಿರುತ್ತದೆ. ಆಗ ಒಂದು ದೇಶದ ಖಾಸಗಿ ಬಂಡವಾಳ ಇನ್ನೊಂದು ದೇಶದ ಖಾಸಗೀ ವಲಯದಲ್ಲಿ ಆ ಸರ್ಕಾರದ ನಿಯಂತ್ರಣಕ್ಕೊಳಪಟ್ಟು ಉದ್ಯಮಗಳನ್ನು ಪ್ರಾರಂಭಿಸಬಹುದು. ಆದರೆ ರಾಷ್ಟ್ರ ಅಧಿವೃದ್ಧಿ ಹೊಂದಿದಂತೆ ವಿದೇಶಿ ಬಂಡವಾಳದ ಅವಲಂಬನವನ್ನು ಕ್ರಮಕ್ರಮವಾಗಿ ಕಡಿಮೆ ಮಾಡುವುದು ಆವಶ್ಯಕವೆನಿಸಿದೆ.

	ಭಾರತದಲ್ಲಿ: ಭಾರತದಲ್ಲಿ ಖಾಸಗಿ, ಸರ್ಕಾರಿ-ಎರಡು ವಲಯಗಳೂ ಇವೆ. ದೇಶದ ಪ್ರಮುಖ ಉದ್ಯೋಗವಾದ ಕೃಷಿ ವಿಶೇಷವಾಗಿ ಖಾಸಗಿ ವಲಯದಲ್ಲಿದೆ. ದೇಶದ ಕೈಗಾರಿಕಾಕರಣ ಇನ್ನೂ ಶೈಶವಾವಸ್ಥೆಯಲ್ಲಿದ್ದರೂ ಕೈಗಾರಿಕೆ, ಗಣಿಗಾರಿಕೆ, ಸಾರಿಗೆ ಹಾಗೂ ಇತರ ಸೇವೆಗಳಲ್ಲಿ ಖಾಸಗಿ ವಲಯ ಗಣನೀಯ ಪ್ರಮಾಣದಲ್ಲಿ ಅಭಿವೃದ್ಧಿಗೆ ಪೂರಕವಾಗಿದೆ. ಪಂಚವಾರ್ಷಿಕ ಯೋಜನೆಗಳಲ್ಲಿ ಖಾಸಗಿ ಹಾಗೂ ಸರ್ಕಾರಿ ವಲಯಗಳೆರಡರಲ್ಲೂ ಬಂಡವಾಳ ಹೂಡಿಕೆ ಹೆಚ್ಚುತ್ತಿದ್ದರೂ ಸರ್ಕಾರಿ ವಲಯದ ದಿನೇದಿನೇ ಹೆಚ್ಚು ಪ್ರಭಾವಶಾಲಿಯಾಗಿ ಬೆಳೆಯುತ್ತಿದೆ.

	ಭಾರತದ ಸರ್ಕಾರ 1948ರಲ್ಲಿ ಘೋಷಿಸಿದ ಕೈಗಾರಿಕಾ ನೀತಿಯಲ್ಲಿ 1 ಕೇಂದ್ರ ಸರ್ಕಾರದ ಏಕಸ್ವಾಮ್ಯವಿರುವ ಉದ್ಯಮಗಳು, 2 ಕ್ರಮೇಣ ಸರ್ಕಾರದ ಒಡೆತನಕ್ಕೆ ಬರುವ ಉದ್ಯಮಗಳು, 3 ಸರ್ಕಾರನಿಯಂತ್ರಿತ ಉದ್ಯಮಗಳು ಮತ್ತು 4 ಇತರ-ಎಂದು ನಾಲ್ಕು ವಿಧಗಳನ್ನಾಗಿ ವಿಂಗಡಿಸಲಾಗಿತ್ತು. ರಾಸಾಯನಿಕ ಗೊಬ್ಬರ, ಹತ್ತಿ ಜವಳಿ, ಉಣ್ಣೆ, ಸಿಮೆಂಟ್, ಸಕ್ಕರೆ, ಕಾಗದ, ರಬ್ಬರ್, ಉಪ್ಪು, ರಾಸಾಯನಿಕಗಳು, ಭಾರಯಂತ್ರಗಳು, ಟ್ರಾಕ್ಟರ್ ಇತ್ಯಾದಿ ಉದ್ಯಮಗಳನ್ನು ಖಾಸಗಿ ವಲಯಕ್ಕೆ ಬಿಟ್ಟುಕೊಟ್ಟು ಸರ್ಕಾರ ಅವುಗಳ ಮೇಲೆ ತನ್ನ ನಿಯಂತ್ರಣವಿರಿಸಿತ್ತು. ಆ ವೇಳೆಗಾಗಲೇ ಖಾಸಗಿ ವಲಯದಲ್ಲಿದ್ದ ಕಬ್ಬಿಣ ಮತ್ತು ಉಕ್ಕು, ಹಡಗು ನಿರ್ಮಾಣ, ಟೆಲಿಫೋನ್, ಟೆಲಿಗ್ರಾಫ್ ಉದ್ಯಮಗಳನ್ನು ಹತ್ತು ವರ್ಷಗಳ ವರೆಗೆ ರಾಷ್ಟ್ರೀಕರಿಸುವುದಿಲ್ಲವೆಂದೂ ಅನಂತರ ಪರಿಶೀಲಿಸಲಾಗುವುದೆಂದೂ ಸರ್ಕಾರ ಘೋಷಿಸಿತು. ಸಮಾಜವಾದಿ ಸಮಾಜದ ರಚನೆಗೆ ಪೂರಕವಾಗುವಂತೆ ಎರಡನೆಯ ಯೋಜನೆಯ ಪ್ರಾರಂಭದಲ್ಲಿ 1956ರಲ್ಲಿ ಕೈಗಾರಿಕಾನೀತಿಯಲ್ಲಿ ಕೈಗಾರಿಕೆಗಳನ್ನು ಮೂರು ವರ್ಗಗಳಾಗಿ ಪುನರ್ವಿಂಗಡಿಸಲಾಯಿತು. ಅದರಲ್ಲೂ ಖಾಸಗಿ ವಲಯಕ್ಕೆ ಸೂಕ್ತ ಅವಕಾಶ ನೀಡಲಾಗಿದೆ.
 
  	ಭಾರತದಲ್ಲಿ ಖಾಸಗಿ ವಲಯದಲ್ಲಿರುವ ಉದ್ಯಮಗಳ ಪ್ರಗತಿಯನ್ನು ಮುಂದೆ ಕೊಡಲಾಗಿದೆ:

		ಖಾಸಗಿ ವಲಯದಲ್ಲಿರುವ	ಖಾಸಗಿ			ಅವುಗಳ ಪಾವತಿಯಾದ
ವರ್ಷ 	    ಸಾರ್ವಜನಿಕ       		ಪರಿಮಿತ		ಒಟ್ಟು    	ಬಂಡವಾಳ
     	    ಪರಿಮಿತ ಕಂಪನಿಗಳು     	ಕಂಪನಿಗಳು        		(ಕೋಟಿ ರೂ.)

1966     	6,329        	20,137   	26,466   	1,807.0
1967     	6,231       	 	20,452   	26,686   	1,840.5
1968     	6,152        	20,939   	27,091   	1,890.9
1969     	6,109        	21,593   	27,702   	1,921.8
1970     	6,097        	23,566   	29,663   	2,002.5

	1970ರ ಕೊನೆಯಲ್ಲಿ ದೇಶದಲ್ಲಿದ್ದ ಸರ್ಕಾರಿ ಕಂಪನಿಗಳ ಸಂಖ್ಯೆ 302. ಅವುಗಳ ಒಟ್ಟು ಪಾವತಿಯಾದ ಬಂಡವಾಳ ರೂ. 1,820 ಕೋಟಿ. ಎಂದರೆ ಒಂದು ಸರ್ಕಾರಿ ಕಂಪನಿಯ ಸರಾಸರಿ ಪಾವತಿಯಾದ ಬಂಡವಾಳ ರೂ. 6 ಕೋಟಿ. ಆದರೆ ಖಾಸಗಿ ವಲಯದ ಒಂದು ಸಂಸ್ಥೆಯ ಸರಾಸರಿ ಬಂಡವಾಳ ರೂ. 7 ಲಕ್ಷ.

	1970-71ರ ಅಂಕಿ-ಅಂಶಗಳ ಪ್ರಕಾರ ಭಾರತದ ಮೊದಲ ಹತ್ತು ದೊಡ್ಡ ಕೈಗಾರಿಕಾ ದೈತ್ಯ ಸಂಸ್ಥೆಗಳಲ್ಲಿ ಮೊದಲ ಒಂಬತ್ತು ಸರ್ಕಾರಿ ವಲಯದಲ್ಲಿವೆ. ಹತ್ತನೆಯದು ಖಾಸಗಿ ವಲಯದ ಅತಿದೊಡ್ಡ ಸಂಸ್ಥೆ. ದೇಶದ ಪ್ರಥಮ 25, 50, 100 ದೈತ್ಯ ಕೈಗಾರಿಕಾ ಸಂಸ್ಥೆಗಳಲ್ಲಿ ಅನುಕ್ರಮವಾಗಿ 11, 29, 71 ಸಂಸ್ಥೆಗಳು ಖಾಸಗಿ ವಲಯದಲ್ಲಿವೆ.

	ದೇಶದಲ್ಲಿರುವ ಖಾಸಗಿ ವಲಯದ ಎಲ್ಲ ಉದ್ಯಮಗಳ ಆಸ್ತಿಗಳು, ಬಂಡವಾಳ, ಲಾಭ ನಷ್ಟ ಇತ್ಯಾದಿಗಳ ಬಗ್ಗೆ ವಿವರವಾದ ಮಾಹಿತಿಗಳು ಲಭ್ಯವಿಲ್ಲ. 1970-71ರಲ್ಲಿ ಪ್ರಥಮ 100 ದೈತ್ಯ ಸಾರ್ವಜನಿಕ ಪರಿಮಿತ ಕಂಪನಿಗಳ ಒಟ್ಟು ಆಸ್ತಿಗಳ ಮೌಲ್ಯ ರೂ. 3,234 ಕೋಟಿ. ಪಾವತಿಯಾದ ಬಂಡವಾಳ ಹಾಗೂ ಸಂಚಿತಿಗಳ (ರಿಸವ್ ್) ಮೊತ್ತ ರೂ. 1,347 ಕೋಟಿ. ವಾರ್ಷಿಕ ಉತ್ಪಾದನೆ ರೂ. 3,021.33 ಕೋಟಿ. ತೆರಿಗೆ ತೆತ್ತ ಅನಂತರ ಉಳಿದ ಲಾಭ ರೂ. 171.63 ಕೋಟಿ. ಲಾಭಾಂಶ ವಿತರಣೆ ಮಾಡಿ ಪುನರ್ವಿನಿಯೋಜನೆಗೆ ಉಳಿದ ಲಾಭ 86.68 ಕೋಟಿ. ಪ್ರಥಮ 100 ದೈತ್ಯ ಕಂಪನಿಗಳಲ್ಲಿ ನಷ್ಟ ಅನುಭವಿಸುತ್ತಿರುವ ಕಂಪನಿಗಳ ಸಂಖ್ಯೆ 19. ಹತ್ತಿ ಜವಳಿ, ಕಾಗದ, ಸಕ್ಕರೆ, ಸಾರಿಗೆ, ಸಿಮೆಂಟ್, ಸಣಬು, ಎಂಜಿನಿಯರಿಂಗ್ ಹಾಗೂ ರಾಸಾಯನಿಕಗಳು, ವಿದ್ಯುತ್ ಉಪಕರಣ ಇತ್ಯಾದಿ ಉದ್ಯಮಗಳು ಪ್ರಮುಖವಾಗಿ ಖಾಸಗಿ ವಲಯದಲ್ಲಿವೆ.		
			  (ಆರ್.ಬಿ.ಎನ್.; ಆರ್.ವಿ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ